ಪ್ರಶ್ನೆಗಳು- 
 	ಸಂಶೋಧನೆ, ವಿಚಾರಣೆ, ಅಭಿಪ್ರಾಯ ಸಂಗ್ರಹ, ಪರೀಕ್ಷೆ, ಆಲೋಚನೆಯ ಪ್ರಚೋದನೆ ಮುಂತಾದ ಸಂದರ್ಭಗಳಲ್ಲಿ ಬಳಸುವ ಪ್ರಶ್ನಾರ್ಥಕ ವಾಕ್ಯಗಳಿವು. ಶಿಕ್ಷಣಕ್ಷೇತ್ರದಲ್ಲಿ ಮೇಲಿನ ಹಲವಾರು ಸಂದರ್ಭಗಳಲ್ಲಿ ಬಳಸಿದರೂ ಮುಖ್ಯವಾಗಿ ಇವನ್ನು ಪಾಠ ಮಾಡುವಾಗ ವಿದ್ಯಾರ್ಥಿಗಳು ವಿಷಯವನ್ನು ಹೆಜ್ಜೆ ಹೆಜ್ಜೆಯಾಗಿ ಗ್ರಹಿಸಿಕೊಳ್ಳಲು ನೆರವಾಗುವಂತೆ ಅಧ್ಯಾಪಕರೂ ಬಳಸಿಕೊಳ್ಳುವರು. ಈ ದೃಷ್ಟಿಯಿಂದ ಇವು ಪಾಠೋಪಕರಣಗಳಲ್ಲಿ ಸೇರುವುದಿದೆ. ಬೋಧನಕಾರ್ಯದಲ್ಲಿ ವಿದ್ಯಾರ್ಥಿಗಳು ಚಟುವಟಿಕೆಯಿಂದಿದ್ದು ಆಲೋಚಿಸಿ ಸ್ವಪ್ರಯತ್ನದಿಂದ ಕಲಿವನ್ನು ಸಾಧಿಸಲು ಇವು ಸಹಾಯ ಮಾಡುತ್ತವೆ. ತಮಗೆ ಅನುಮಾನ ಬಂದಾಗ ಅಥವಾ ಅರ್ಥವಾಗದಾಗ ವಿದ್ಯಾರ್ಥಿಗಳು ತಾವೂ ಪ್ರಶ್ನೆಗಳನ್ನು ಹಾಕಿ ಅಧ್ಯಾಪಕರಿಂದ ಸ್ಪಷ್ಟೀಕರಣ ಪಡೆಯುವುದುಂಟು. ಪ್ರಶ್ನೋತ್ತರ ರೀತಿಯ ಬೋಧನಕ್ರಮ ಸಾಕ್ರಟೀಸನ ಬೋಧನಕ್ರಮದಂತೆಯೇ ಇರುವುದರಿಂದ ಶಿಕ್ಷಣ ವಿಧಾನಗಳಲ್ಲಿ ಇದಕ್ಕೆ ಹೆಚ್ಚಿನ ಪ್ರಾಧಾನ್ಯವಿದೆ.

	ಪಾಠಬೋಧನೆಯ ಬೇರೆ ಬೇರೆ ಅಂತಸ್ತಿನಲ್ಲಿ ಬಳಸುವ ಪ್ರಶ್ನೆಗಳು ಬೇರೆ ಬೇರೆ ಲಕ್ಷಣಗಳನ್ನು ಪಡೆದಿರುವುದು ಅಗತ್ಯವಾದರೂ ಸಾಮಾನ್ಯವಾಗಿ ಒಳ್ಳೆಯ ಪ್ರಶ್ನೆಗಳು ಮಕ್ಕಳ ಕುತೂಹಲವನ್ನು ಕೆರಳಿಸಿ, ವಿಷಯದಲ್ಲಿ ಆಸಕ್ತಿ ಹುಟ್ಟಿಸಿ ಜ್ಞಾನಾರ್ಜನೆಗಾಗಿ ಅಗತ್ಯವಾದ ಆಲೋಚನಾ ಶಕ್ತಿಯನ್ನು ಪ್ರಚೋದಿಸುವಂತಿರಬೇಕು. ಮಕ್ಕಳ ಆಸಕ್ತಿ ಯಾವ ಮುಖವಾಗಿದೆಯೆಂಬುದನ್ನು ಗ್ರಹಿಸಿಕೊಂಡು ಬೋಧನೆಗೂ, ಕಲಿವಿಗೂ ಸಂಬಂಧಕಲ್ಪಿಸಿಕೊಳ್ಳಲು ನೆರವಾಗುವಂತಿರಬೇಕು; ಕಾರ್ಯಕಾರಣಜ್ಞಾನವನ್ನು ತೀವ್ರಗೊಳಿಸಿ ಬೋಧನ ಸುಗಮವಾಗಿ ಸಾಗಲು ತಕ್ಕ ಹಿನ್ನಲೆ ಒದಗಿಸುವಂತೆಯೂ ವಿಷಯದ ಪ್ರಧಾನ ಅಂಶಗಳನ್ನು ಗೌಣ ಅಂಶಗಳಿಂದ ಪ್ರತ್ಯೇಕಿಸಿ ಅವುಗಳ ಮೇಲೆ ಗಮನವನ್ನು ಕೇಂದ್ರಿಕರಿಸುವಂತೆಯೂ ಮನಸ್ಸನ್ನು ಅಡ್ಡದಾರಿಗೆ ಹರಿಯಬಿಟ್ಟು ಪಾಠವಿಷಯದಿಂದ ವಿಮುಖರಾಗಿರುವ ಮಕ್ಕಳ ಅವಧಾನವನ್ನು ಪಾಠದ ಕಡೆಗೆ ಸೆಳೆಯುವಂತೆಯೂ ಅಗತ್ಯವೆನಿಸುವಡೆ ಭಾಷೆ, ಭಾವ, ಸನ್ನಿವೇಶ, ರಸಾಸ್ವಾದನೆ-ಇವುಗಳ ಕಡೆಗೂ ಮನಸ್ಸನ್ನು ಆಕರ್ಷಿಸುವಂತೆಯೂ ಇರಬೇಕು. ಪ್ರಶ್ನೆಯ ಭಾಷೆ ಸರಳವಾಗಿದ್ದು ಅದು ಚಿಕ್ಕದಾಗಿರಬೇಕಲ್ಲದೆ ನಿರ್ದಿಷ್ಟ ಉತ್ತರ ಬಯಸುವಂತೆಯೂ ಇರಬೇಕು. ಹೌದು, ಅಲ್ಲ, ಇದೆ, ಇಲ್ಲ, ಅದು, ಇದು ಮುಂತಾದ ಉತ್ತರ ಬಯಸುವ ಪ್ರಶ್ನೆಗಳಿಗೆ ಮಕ್ಕಳು ಆಲೋಚಿಸಿಯೇ ಉತ್ತರ ಹೇಳಬಹುದಾದ್ದರಿಂದ ಅಂಥ ಪ್ರಶ್ನೆಗಳು ಒಳ್ಳೆಯವಲ್ಲ.

	ಪಾಠವೊಂದನ್ನು ಬೋಧಿಸುವಾಗ ಬೇರೆ ಬೇರೆ ಅಂತಸ್ತಿನಲ್ಲಿ ಬೇರೆ ಬೇರೆ ಉದ್ದೇಶದಿಂದ ಬೇರೆ ಬೇರೆ ರೀತಿಯ ಪ್ರಶ್ನೆಗಳನ್ನು ಬಳಸಬೇಕಾಗುತ್ತದೆ. ಪೀಠಿಕೆಯ ಅಂತಸ್ತಿನಲ್ಲಿ ಆ ಪಾಠ ವಿಷಯಕ್ಕೆ ಸಂಬಂಧಿಸಿದ ಮಕ್ಕಳ ಪೂರ್ವಾನುಭವವನ್ನು ಸ್ಮರಣೆಗೆ ತಂದುಕೊಡಲು ವ್ಯಾಪಕವಾದ ಉತ್ತರಗಳನ್ನು ಬಯಸುವಂಥ ಪ್ರಶ್ನೆಗಳನ್ನು ಹಾಕಬೇಕು. ಇವನ್ನು ಸ್ಮರಣಾರ್ಥಕ ಪ್ರಶ್ನೆಗಳೆನ್ನುವರು. ಅವು ಸಂಖ್ಯೆಯಲ್ಲಿ ಕಡಿಮೆಯಿದ್ದು 3-4 ನಿಮಿಷಗಳ ಕಾಲದಲ್ಲಿ ಅಗತ್ಯ ವಿವರಗಳನ್ನೆಲ್ಲ ಹೇಳಿಸುವಂತಿರುತ್ತವೆ. ಪೀಠಿಕೆಯ ಅಂತ್ಯದಲ್ಲಿ ಸದ್ಯದ (ಆ ದಿನದ) ಪಾಠಕ್ಕೆ ವಿದ್ಯಾರ್ಥಿಗಳ ಉದ್ದೇಶವನ್ನು ಮೊನೆಗೊಳಿಸಬೇಕು. ಆಗ ಎತ್ತುವ ಸಮಸ್ಯಾರೂಪದ ಪ್ರಶ್ನೆಯನ್ನು ಉದ್ದೇಶ ನಿರೂಪಣಾ ಪ್ರಶ್ನೆಯೆನ್ನುವರು. ಅನಂತರ ವಿಷಯವನ್ನು ವಿದ್ಯಾರ್ಥಿಗಳು ವ್ಯಾಸಂಗ ಮಾಡಬೇಕು. ಅದು ವಿಷಯಮಂಡನೆಯ ಅಂತಸ್ತು. ಆಗ ಸಣ್ಣ ಸಣ್ಣ ಉತ್ತರಗಳನ್ನು ಬಯಸುವ ಹಾಗೂ ಮಕ್ಕಳು ಚಟುವಟಿಕೆಯಿಂದಿದ್ದು ಕಲಿಯಲು ನೆರವಾಗುವಂತೆ ವಿಷಯವನ್ನು ಸ್ಪಷ್ಟೀಕರಿಸಬಲ್ಲ ಪ್ರಶ್ನೆಗಳು ಅಗತ್ಯ. ಸಂಖ್ಯೆಯಲ್ಲಿ ಅವು ಹೆಚ್ಚಾಗಿಯೇ ಇರುತ್ತವೆ. ಈ ಪ್ರಶ್ನೆಗಳನ್ನು ಸ್ಪಷ್ಟೀಕರಣ ಪ್ರಶ್ನೆಗಳೆನ್ನುವರು. ಒಂದೊಂದು ಪ್ರಶ್ನೆಗೂ ನಿರ್ದಿಷ್ಟ ಉತ್ತರ ಬರುವಂತಿರುವುದರಿಂದ ಮಕ್ಕಳು ಮಾನಸಿಕವಾಗಿ ಚಟುವಟಿಕೆಯಿಂದಿದ್ದು ಸ್ವಪ್ರಯತ್ನದಿಂದ ವಿಷಯವನ್ನು ಕ್ರಮಕ್ರಮವಾಗಿ ಅರಿತುಕೊಳ್ಳುವಂತಿರುವ ಈ ಪ್ರಶ್ನೆಗಳನ್ನು ಅಧ್ಯಾಪಕರು ತರಗತಿಯಲ್ಲೇ ರಚಿಸುವುದು ಸಾಧ್ಯವಾಗದು. ಮನೆಯಲ್ಲಿ ಚೆನ್ನಾಗಿ ಆಲೋಚಿಸಿ, ಬರತಕ್ಕ ಉತ್ತರಗಳನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ಪ್ರಶ್ನೆಗಳನ್ನು ರೂಪಿಸಿಕೊಂಡು ತಮ್ಮ ಪಾಠದ ಟಿಪ್ಪಣಿಯಲ್ಲಿ ಬರೆದುಕೊಂಡು ಬರಬೇಕು. ಉದ್ದೇಶಿಸಿದ ಉತ್ತರ ಬಾರದಿದ್ದಾಗ ಉದ್ದೇಶಿತ ಉತ್ತರದ ಕಡೆಗೆ ಕೈ ತೋರುವಂಥ ಉಪಪ್ರಶ್ನೆಗಳು ಅಗತ್ಯವಾಗುತ್ತವೆ. ಅವನ್ನು ನಿರ್ದೇಶನಾರ್ಥ ಪ್ರಶ್ನೆಗಳೆನ್ನುವರು. ಈ ಅಂತಸ್ತಿನಲ್ಲಿ ಅಧ್ಯಾಪಕರು ಬಳಸುವ ಪ್ರಶ್ನೆಗಳ ಸ್ವರೂಪ, ಅವನ್ನು ಪ್ರಯೋಗಿಸುವ ರೀತಿ, ಅವಕ್ಕೆ ದೊರೆತ ಉತ್ತರಗಳ ಯೋಗ್ಯತೆ - ಇವು ಅಧ್ಯಾಪಕರ ಬೋಧನಕೌಶಲ್ಯದ ಮಟ್ಟವನ್ನು ತೋರಿಸಬಲ್ಲವೆಂದು ಹೇಳುವುದುಂಟು. ಪಾಠದ ಕೊನೆಯಲ್ಲಿ ಅಥವಾ ಅದರ ಪ್ರತಿಯೊಂದು ವಿಭಾಗದ ಕೊನೆಯಲ್ಲಿ ಅದುತನಕ ಬಿಡಿಬಿಡಿಯಾಗಿ, ಹಂತಹಂತವಾಗಿ ಸ್ಫುಟಗೊಂಡ ಅಂಶಗಳೆಲ್ಲ ಒಂದಕ್ಕೊಂದಕ್ಕೆ ಸಂಬಂಧ ಕಲ್ಪಿಸಿಕೊಂಡು ಸಮಗ್ರತೆಯನ್ನು ಸಾಧಿಸಲು ನೆರವಾಗುವಂತೆ ಮಾಡುವುದು ಅಗತ್ಯ. ಆಗ ಮಕ್ಕಳಿಂದಲೇ ಆ ಕಾರ್ಯವನ್ನು ಮಾಡಿಸಬೇಕು. ಅದಕ್ಕಾಗಿ ವಿಶಾಲ ಅರ್ಥವನ್ನು ಬಯಸುವ ಹಾಗೂ ಅರಿತ ಅಂಶಗಳನ್ನು ಪುನರಾವಲೋಕಿಸುವಂಥ ಪ್ರಶ್ನೆಗಳನ್ನು ಬಳಸಬೇಕಾಗುತ್ತದೆ. ಇವನ್ನು ಪುನರಾವಲೋಕನ ಪ್ರಶ್ನೆಗಳೆನ್ನುವರು. ವಿಜ್ಞಾನ ವ್ಯಾಕರಣ ಗಣಿತ ಭೂವಿವರಣೆ ಮುಂತಾದ ಪಾಠಗಳ ಕೊನೆಯ ಅಂತಸ್ತಿನಲ್ಲಿ ತತ್ತ್ವನಿಯಮ ಅಥವಾ ಸೂತ್ರಗಳನ್ನು ರೂಪಿಸುವ ಅಗತ್ಯವಿರುವುದುಂಟು. ಅದು ತನಕ ಅರಿತುಕೊಂಡ ಅಥವಾ ಪ್ರಯೋಗದಿಂದ ಪಡೆದುಕೊಂಡ ಅಂಕಿಅಂಶಾದಿಗಳನ್ನು ಆ ಕಾರ್ಯಕ್ಕೆ ಬಳಸಬೇಕಾಗುತ್ತದೆ. ಆಗ ಆ ಅಂಕಿ ಅಂಶಗಳಲ್ಲಿ ಅಡಗಿರುವ ಸಂಬಂಧವನ್ನು ವಿದ್ಯಾರ್ಥಿಗಳು ಗ್ರಹಿಸಿಕೊಂಡು ಅವೆಲ್ಲಕ್ಕೂ ಆಧಾರವಾಗಿರುವ ತತ್ತ್ವನಿಯಮಾದಿಗಳನ್ನು ದರ್ಶಿಸುವಂತೆ ಮಾಡಲು ಯುಕ್ತ ರೀತಿಯ ಪ್ರಶ್ನೆಗಳನ್ನು ಬಳಸಬೇಕು. ಅವನ್ನು ಸಂಬಂಧಕಲ್ಪನಾ ಪ್ರಶ್ನೆಗಳೆನ್ನುವರು. ಪಾಠ ಮುಗಿಸಿಕೊಂಡು ತರಗತಿಯಲ್ಲೊ ಮನೆಯಲ್ಲೊ ಅವರು ಕಲಿತದ್ದನ್ನು ದೃಢಪಡಿಸಿಕೊಳ್ಳಲು ನೆರವಾಗುವಂಥ ಪುನರಾವರ್ತನೆಯ ಪ್ರಶ್ನೆಗಳನ್ನು ಪಾಠ ಮುಗಿಸುವ ಮುನ್ನ ಕೊಡಬೇಕಾಗುತ್ತದೆ. ಯಾವ ಪಾಠವನ್ನೇ ಆಗಲಿ ಬರಿಯ ಪ್ರಶ್ನೆಗಳ ಮೂಲಕವೇ ಬೋಧಿಸಲು ಸಾಧ್ಯವಿಲ್ಲ. ಪ್ರಶ್ನೋತ್ತರಗಳು ವಿದ್ಯಾರ್ಥಿಗಳ ಆಲೋಚನೆಯನ್ನು ಪ್ರಚೋದಿಸಿ ನಿರ್ದಿಷ್ಟ ಮಾರ್ಗದಲ್ಲಿ ಸಾಗುವಂತೆ ಮಾಡುವವಾದರೂ ಆ ಉತ್ತರಗಳನ್ನೂ ಭಾವನೆಗಳನ್ನೂ ಒಂದುಗೂಡಿಸಲು ಅಗತ್ಯವಾದ ವಿವರ ವರ್ಣನೆ ಸ್ಪಷ್ಟೀಕರಣ ಇತ್ಯಾದಿ ಪೂರಾಕಾಂಶಗಳನ್ನು ಅಧ್ಯಾಪಕರು ಒದಗಿಸಬೇಕಾಗುತ್ತದೆ. ನಿಜವಾಗಿ ವಿದ್ಯಾರ್ಥಿಗಳಿಂದ ಉತ್ತರರೂಪವಾಗಿ ಬಯಸಲಾರದಂಥ ಅಂಶಗಳೇ ಹೆಚ್ಚಾಗಿರುವ ಇತಿಹಾಸ ಮುಂತಾದ ಪಾಠಬೋಧನೆಯಲ್ಲಿ ಪ್ರಶ್ನೆಗಳ ಪಾತ್ರ ಅಷ್ಟಾಗಿ ಇರುವುದಿಲ್ಲ. ಅನೇಕ ಅಂಶಗಳನ್ನು ಅಧ್ಯಾಪಕರೇ ಹೇಳಬೇಕಾಗಿರುತ್ತದೆ. ಆದರೂ ಕಥಾಸನ್ನಿವೇಶಗಳಿಂದ ನಡೆದ ಘಟನೆಗಳಿಂದ ಆಲೋಚಿಸಬೇಕಾದ ಗುಣವಿಮರ್ಶೆ ಆಡಳಿತನೀತಿ ಕಾರ್ಯಕಾರಣ ಸಂಬಂಧ ವ್ಯಕ್ತಿ ತಳೆದ ಸಾಮಾಜಿಕ ಆರ್ಥಿಕ ಧಾರ್ಮಿಕ ಧೋರಣೆಗಳ ಸಂಭವನೀಯತೆಯ ಫಲಾಫಲಗಳು ಮುಂತಾದವನ್ನು ಅಧ್ಯಾಪಕರೇ ಹೇಳಿಬಿಡುವುದರ ಬದಲು ಪ್ರಶ್ನೆಗಳನ್ನು ಹಾಕಿ ವಿದ್ಯಾರ್ಥಿಗಳೇ ಆಲೋಚಿಸಿ ಹೇಳುವಂತೆ ಮಾಡುವುದು ಒಳ್ಳೆಯದು.

	ಉದ್ದೇಶಕ್ಕೆ ತಕ್ಕಂತೆ ಪ್ರಶ್ನೆಗಳ ರಚನೆಯಲ್ಲಿ ವಹಿಸಬೇಕಾದ ಎಚ್ಚರಿಕೆಯಂತೆ ಅದನ್ನು ಪ್ರಯೋಗಿಸುವಾಗಲೂ ಜಾಣ್ಮೆ, ಕೌಶಲ್ಯ ಅಗತ್ಯ. ಅದನ್ನು ಕೇವಲ ಯಾಂತ್ರಿಕವಾಗಿ ಏಕನಾದದ ಬರಡು ಧ್ವನಿಯಲ್ಲಿ ಉಚ್ಚರಿಸದೆ ತಕ್ಕಷ್ಟು ಭಾವಪೂರ್ಣವಾಗಿ ಪ್ರಯೋಗಿಸಬೇಕು. ಮೊದಲು ಪ್ರಶ್ನೆಯನ್ನು ಇಡೀ ತರಗತಿಯನ್ನೇ ಉದ್ದೇಶಿಸಿ ಕೇಳಿ, ಸ್ವಲ್ಪ ಕಾಲಾವಕಾಶ ಕೊಟ್ಟು ಒಬ್ಬ ನಿರ್ದಿಷ್ಟ ವಿದ್ಯಾರ್ಥಿಯನ್ನು ಉದ್ದೇಶಿಸಿ ಉತ್ತರ ಹೇಳುವಂತೆ ಕೇಳಬೇಕು. ಆಗ ತರಗತಿಯ ಪ್ರತಿ ವಿದ್ಯಾರ್ಥಿಯೂ ಅಧ್ಯಾಪಕರು ತನ್ನನ್ನೇ ಕೇಳುವರೆಂದು ಊಹಿಸಿ ಪ್ರಶ್ನೆಗೆ ಉತ್ತರ ಹುಡುಕಿ ಸಿದ್ಧನಾಗಿರುತ್ತಾನೆ ಹಾಗೆ ಮಾಡದೆ ಒಬ್ಬ ವಿದ್ಯಾರ್ಥಿಯನ್ನೇ ಬೆರಳಿಟ್ಟು ತೋರಿಸಿ ಪ್ರಶ್ನೆ ಹಾಕಿದರೆ ಮಿಕ್ಕವರು ನಾವೇನೂ ಉತ್ತರ ಹೇಳಬೇಕಾಗಿಲ್ಲವೆಂದು ಆಲೋಚಿಸದೆ ನಿಷ್ಕಿೃಯರಾಗಿ ಕುಳಿತುಬಿಡುವರು. ಕೇವಲ ಪ್ರಭಾಂತರಿಗೆ ಮಾತ್ರವಲ್ಲದೆ ಉಳಿದವರಿಗೂ ಪ್ರಶ್ನೆ ಹಾಕುವುದು ಅಗತ್ಯ. ತರಗತಿಯಲ್ಲಿ ಮುಂದುಗಡೆ ಕುಳಿತವರನ್ನೇ ಕೇಳದೆ ತರಗತಿಯ ಎಲ್ಲ ಭಾಗಗಳಿಂದಲೂ ವಿದ್ಯಾರ್ಥಿಗಳನ್ನು ಆರಿಸಿಕೊಳ್ಳಬೇಕು. ಪ್ರಶ್ನೆಗೆ ವಿದ್ಯಾರ್ಥಿಯೊಬ್ಬ ಉತ್ತರ ಹೇಳಲಾರನೆಂದು ಖಚಿತವಾದಾಗ ಮತ್ತೊಬ್ಬ ವಿದ್ಯಾರ್ಥಿಯನ್ನು ಪ್ರಶ್ನಿಸಬಹುದು. ತರಗತಿಯಲ್ಲಿ ಯಾರೂ ಉತ್ತರಿಸಲಾರದಾದಾಗ ಅಧ್ಯಾಪಕರು ಸಹಾಯಕ ಅಥವಾ ಮಾರ್ಗದರ್ಶಕ ಪ್ರಶ್ನೆಗಳನ್ನು ಹಾಕಿ ಮೂಲಪ್ರಶ್ನೆಗೆ ಉತ್ತರ ಹೇಳಿಸಲು ಯತ್ನಿಸಬಹುದು. ಹಾಗೂ ಉತ್ತರ ಬಾರದಾದಾಗ ತಮ್ಮ ಪ್ರಶ್ನೆಯಲ್ಲಿ ದೋಷವಿರಬಹುದೆಂದು ಅದನ್ನು ಬದಲಾಯಿಸುವುದು ಒಳ್ಳೆಯದು. ಅದು ಉಚಿತವಾದ್ದೇ ಆಗಿದ್ದು ವಿದ್ಯಾರ್ಥಿಗಳು ಉತ್ತರ ಹೇಳದಾದಾಗ ಇನ್ನೂ ಹೆಚ್ಚು ಕಾಲಹರಣ ಮಾಡುವುದರ ಬದಲು ಅನಿವಾರ್ಯವಾಗಿ ಅಧ್ಯಾಪಕರು ಉತ್ತರ ಹೇಳಬಹುದು.

	ಕೊನೆಯದಾಗಿ ಒಂದು ಮಾತು. ಜಾಣ ವಿದ್ಯಾರ್ಥಿಗಳನ್ನು ಹೊಗಳುವುದು ಸರಿಯಾದರೂ ದಡ್ಡ ವಿದ್ಯಾರ್ಥಿಗಳನ್ನು ಅವರು ಉತ್ತರಿಸಲಾಗದಂಥ ಪ್ರಶ್ನೆಗಳನ್ನು ಕೇಳಿ ಮುಖಭಂಗ ಮಾಡುವುದು ಸರಿಯಲ್ಲ. ಸುಲಭ ಪ್ರಶ್ನೆಗಳ ಮೂಲಕ ಅವರನ್ನು ಹುರಿದುಂಬಿಸಿ ಅವರಲ್ಲಿ ಆತ್ಮಪ್ರತ್ಯಯ ಹೆಚ್ಚುವಂತೆ ಮಾಡುವುದು ನಿಪುಣ ಉಪಾಧ್ಯಾಯರ ಗುರಿಯಾಗಬೇಕು.

	ಉತ್ತರಗಳ ಸಂಸ್ಕರಣ: ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಹಾಕುವಾಗ ಎಚ್ಚರಿಕೆ ಅಗತ್ಯವಾಗುವಂತೆ ಅವರಿಂದ ಬಂದ ಉತ್ತರಗಳನ್ನು ಸಂಸ್ಕರಿಸುವಾಗಲೂ ಎಚ್ಚರಿಕೆ ಅಗತ್ಯ. ವಿದ್ಯಾರ್ಥಿಗಳ ಉತ್ತರ ಒಂದು ಪದ ಅಥವಾ ಒಂದು ಪದಕುಂಜದ ರೂಪದಲ್ಲಿ ಅಥವಾ ಅಸ್ಪಷ್ಟವಾಗಿ ಇರಬಹುದು. ಆ ಉತ್ತರವನ್ನು ಪೂರ್ಣಗೊಳಿಸಿ ಇಡೀ ತರಗತಿಯೇ ಅರಿತುಕೊಳ್ಳುವಂತೆ ಸ್ಪಷ್ಟಪಡಿಸಿ ಪೂರ್ಣಗೊಳಿಸಬೇಕು. ತಪ್ಪು ಉತ್ತರ ಹೇಳಿದಾಗ ಸೂಕ್ಷ್ಮವಾಗಿ ಎಚ್ಚರಿಸಬೇಕು. ಕಟುವಾಗಿ ನಿಂದಿಸುವುದಾಗಲಿ ಹೀಯಾಳಿಸುವುದಾಗಲಿ ಕೂಡದು. ಒಳ್ಳೆಯ ಉತ್ತರ ಬಂದಾಗ ಮೆಚ್ಚಿಗೆಯನ್ನು ವ್ಯಕ್ತಪಡಿಸಬಹುದು.
(ಎನ್,ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ